ಮಗನಿಗಾಗಿ ಮೈದಾನದಲ್ಲೇ ಆಟೋಗ್ರಾಫ್ ಸಹಿ ಮಾಡಿದ ಶೇನ್ ವ್ಯಾಟ್ಸನ್!
ಸಿಡ್ನಿ: ಬಿಗ್ ಬ್ಯಾಷ್ ಗೇಮ್ ನ ನಡುವೆಯೇ ಮೈದಾನದಲ್ಲಿ ತನ್ನ ಮಗನಿಗಾಗಿ ಆಟೋಗ್ರಾಫ್ ಗೆ ಸಹಿ ಮಾಡಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಶೇನ್ ವ್ಯಾಟ್ಸನ್ ಅವರ ವೀಡಿಯೋ ಈಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ವ್ಯಾಟ್ಸನ್ ಅವರ ಪುತ್ರ ವಿಲ್ ವ್ಯಾಟ್ಸನ್ ಸಿಡ್ನಿ ಥಂಡರ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವೆ ನಡೆಯುತ್ತಿದ್ದ ಪಂದ್ಯದ ಮದ್ಯೆ ಪಿಚ್ ಗೆ ಜಿಗಿದಿದ್ದು ಇದು ತಂದೆ-ಮಗನ ನಡುವಿನ ಬಾಂಧವ್ಯದ ಬೆಸುಗೆಗೆ ಸಾಕ್ಷಿಯಾಗಿದ್ದು ವ್ಯಾಟ್ಸನ್ ಮಗನ ಕ್ಯಾಪ್ ಹಾಗೂ ಶರ್ಟ್ ಮೇಲೆ ತನ್ನ ಆಟೋಗ್ರಾಫ್ ಸಹಿ ಹಾಕುವುದರ ಮೂಲಕ ವೀಕ್ಷಕರ ಕಣ್ಣುಗಳನ್ನು ಒದ್ದೆ ಮಾಡಿದ್ದಾರೆ.
ಬಿಗ್ ಬ್ಯಾಷ್ ಲೀಗ್ ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಈ ವೀಡಿಯೋ ಶೇರ್ ಆಗಿದೆ. "ಶೇನ್ ವ್ಯಾಟ್ಸನ್ ಹಾಗೂ ಆತನ ಪುತ್ರ ವಿಲ್ಲೆ ಅವರ ಅಮೂಲ್ಯ ನೆನಪಿನ ಕ್ಷಣ" ಎಂದು ಟಿಪ್ಪಣಿಯೊಂದಿಗೆ ಶೇರ್ ಆಗಿರುವ ಈ ವೀಡಿಯೋವನ್ನು 9000 ಜನ ಲೈಕ್ ಮಾಡಿದ್ದರೆ 1000 ಮಂದಿ ರೀಟ್ವೀಟ್ ಮಾಡಿದ್ದಾರೆ.
ಸಿಡ್ನಿ ಥಂಡರ್ ತಂಡಕ್ಕಾಗಿ ಆಡುತ್ತಿರುವ ವ್ಯಾಟ್ಸನ್ 40 ಬಾಲ್ ಗಳಲ್ಲಿ 68 ರನ್ ಗಳಿಸಿದ್ದಾರೆ. ಅಲ್ಲದೆ ಇನ್ನಿಂಗ್ಸ್ ನಲ್ಲಿ ಒಟ್ಟು ಐದು ಸಿಕ್ಸರ್ ಹಾಗೂ ನಾಲ್ಕ್ಯು ಬೌಂಡರಿ ಬಾರಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಿಡ್ನಿ ಥಂಡರ್ ತಂಡ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 168/6 ರನ್ ಗಳಿಸಿ ವಿಜೇತವಾಗಿದೆ.